ಇಮ್ಮರ್ಮಾನ್, ಕಾರ್ಲ್ ಲೆಬ್ರೆಚ್ಟ್
1796-1840. ಜರ್ಮನಿಯ ಕವಿ, ನಾಟಕಕಾರ ಮತ್ತು ಕಾದಂಬರಿಕಾರ. ಜನನ ಮ್ಯಾಗ್‍ಡೀಬರ್ಗ್‍ನಲ್ಲಿ. ಹಲ್ಲೆ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರವನ್ನು ಅಭ್ಯಾಸಮಾಡಿ 1817ರಲ್ಲಿ ಪ್ರಷ್ಯದ ನ್ಯಾಯಾಂಗ ಇಲಾಖೆಯಲ್ಲಿ ನೌಕರನಾದ. 1823ರಲ್ಲಿ ನ್ಯಾಯಾಧೀಶನಾಗಿ 1829ರಲ್ಲಿ ಮ್ಯಾಜಿಸ್ಟ್ರೇಟನಾದ. 1829ರಲ್ಲಿ ಡಸ್ಸೆಲ್‍ಡಾರ್ಫ್ ವಿಭಾಗದ ನ್ಯಾಯಾಂಗ ಮುಖ್ಯಸ್ಥನಾಗಿ ನೇಮಿತನಾದ. ಈತನ ಅಧಿಕಾರ ವ್ಯಾಪ್ತಿ ಭೂವಿಭಾಗವನ್ನು ಕುರಿತದ್ದಾಗಿತ್ತು. 1837ರಲ್ಲಿ ಡಸ್ಸೆಲ್‍ಡಾರ್ಫ್ ನಗರದಲ್ಲಿ ನಾಟ್ಯಶಾಲೆಗಳ ಸಂಘವನ್ನು ಸ್ಥಾಪಿಸಿದ. 1834-1836ರವರೆಗೆ ಪ್ರಾದೇಶಿಕ ನಾಟ್ಯಶಾಲೆಗಳ ನಿಯಂತ್ರಕನಾಗಿದ್ದ. ಈ ಕೆಲಸ ಆರ್ಥಿಕದೃಷ್ಟಿಯಿಂದ ಇಮ್ಮರ್ಮಾನ್‍ಗೆ ಅನುಕೂಲಕರವಾಗಿಲ್ಲವಾದರೂ ಇದಕ್ಕೆ ಜರ್ಮನಿಯ ನಾಟಕದ ಇತಿಹಾಸದಲ್ಲಿ ಮಹತ್ತ್ವದ ಸ್ಥಾನವಿದೆ. ಪ್ರಷ್ಯದ ಸೈನ್ಯಾಧಿಕಾರಿ ಲಟ್‍ಜಾóನ ಮೇಧಾವಿ ಪತ್ನಿ ಎಲೀಜûಳನ್ನು ಇಮ್ಮರ್ಮಾನ್ ಪ್ರೇಮಿಸಿದ. 1825ರಲ್ಲಿ ವಿವಾಹವಿಚ್ಛೇದನೆ ಮಾಡಿಕೊಂಡ ಎಲೀಜû ಎರಡನೆಯ ಮದುವೆಗೆ ಒಪ್ಪದಿದ್ದ ಕಾರಣ ಆಕೆಯ ಮತ್ತು ಇಮ್ಮರ್ಮಾನನ 14 ವರ್ಷಗಳ ಪ್ರಣಯ ಹಠಾತ್ತನೆ ಕೊನೆಗೊಂಡಿತು. 1839ರಲ್ಲಿ ಮೇರಿಯಾನೆ ನಿಮೀಯರ್ ಎಂಬ 20ರ ಕನ್ಯೆಯನ್ನು ಈತ ಮದುವೆಯಾದ. ತನ್ನ ಈ ಸಂಸಾರದಿಂದ ಪಡೆದ ನೆಮ್ಮದಿಯನ್ನು, ಸುಖವನ್ನು ತನ್ನ ಮಹಾಕೃತಿ ಟ್ರಿಸ್ಟ್ರಾನ್ ಅಂಡ್ ಐಸೊಡೋಲ್ ಎಂಬುದರಲ್ಲಿ ಈತ ಅಭಿವ್ಯಕ್ತಗೊಳಿಸಿದ್ದಾನೆ. ಆದರೆ ಮರುವರ್ಷವೇ ತನ್ನ 44ನೆಯ ವಯಸ್ಸಿನಲ್ಲಿ ಈತ ದೈವಾಧೀನನಾದ.

	ಇಮ್ಮರ್ಮಾನ್ ಜರ್ಮನ್ ಸಾಹಿತ್ಯದಲ್ಲಿ ನಾಟಕಕಾರ ಮತ್ತು ಕಾದಂಬರಿಕಾರನೆಂದು ಹೆಸರುವಾಸಿ ಯಾಗಿದ್ದಾನೆ. ಆದರೆ ಇವನ ಸಮಕಾಲೀನ ಗಯಟೆಯ ಪ್ರಾಶಸ್ತ್ಯದಿಂದಾಗಿ ಈತನ ರೂಪಕಗಳು ಆ ಕಾಲದಲ್ಲಿ ಜನಮನವನ್ನು ಸೆಳೆಯಲಾಗಲಿಲ್ಲ. ಈತನ ಎರಡು ಪ್ರಸಿದ್ದವಾದ ಕಾದಂಬರಿಗಳಲ್ಲಿ ಅನುಜಾತರು (Die Epigonen) ಅಧ್ಯಯನ ಯೋಗ್ಯವಾದುದು. 18ನೆಯ ಶತಮಾನದಲ್ಲಿ ಜರ್ಮನಿಯ ಜನಜೀವನ ಹೇಗಿದ್ದಿತು, ಆ ಜೀವನಕ್ರಮ ಬದಲಾದ ಬಗೆ ಹೇಗೆ? ಆ ಬದಲಾವಣೆಗೆ ಕಾರಣಗಳಾವುವು? - ಎಂಬ ವಿವರಗಳನ್ನು ಈ ಕಾದಂಬರಿಯಲ್ಲಿ ನೋಡಬಹುದು. ಈತನ ಮರಣಾನಂತರ ಪ್ರಕಟವಾದ ನೆನಪುಗಳು (Memorabillen) ಎಂಬ ಪುಸ್ತಕ 1813ರ ಹಿಂದೆ ಜರ್ಮನಿಯ ಜನಜೀವನ ಹೇಗಿತ್ತೆಂಬುದನ್ನು ಸ್ಪಷ್ಟಪಡಿಸುತ್ತದೆ. 

	ಈತನ ರೂಪಕಗಳಲ್ಲಿ 1828ರಲ್ಲಿ ಅಭಿನಯಿಸಲ್ಪಟ್ಟ ಟೈರೊಲ್‍ನಲ್ಲಿ ರುದ್ರಕ್ರೀಡೆ (Treurspiel in Tirol) ಎಂಬುದು ಈಗಲೂ ವ್ಯಾಸಂಗಕ್ಕೆ ಅರ್ಹವಾದ ಕೃತಿ.								
(ಕೆ.ಕೆ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ